ದಾಸನ ಮಾಡಿಕೊ  ಎನ್ನ
ಸ್ವಾಮಿ ಸಾಸಿರನಾಮದ ವೆಂಕಟರಮಣ || ಪ ||

ದುರುಬುದ್ಧಿಗಳನೆಲ್ಲ  ಬಿಡಿಸೊ
ನಿನ್ನ  ಕರುಣಕವಚವೆನ್ನ  ಹರಣಕ್ಕೆ  ತೊಡಿಸೊ |
ಚರಣಸೆವೆ  ಎನಗೆ  ಕೊಡಿಸೊ ಅಭಯ
ಕರಪುಷ್ಪವ ಎನ್ನ  ಶಿರದಲ್ಲಿ  ಮುಡಿಸೊ ||೧||
|ದಾಸನ |

ದೃಢಭಕ್ತಿ  ನಿನ್ನಲ್ಲಿ  ಬೇಡಿ
ನಾ  ಅಡಿಗೆರಗುವೆನಯ್ಯ  ಅನುದಿನ  ಪಾಡಿ |
ಕಡೆಗಣ್ಣಲೆ ಎನ್ನ  ನೋಡಿ  ಬಿಡುವೆ
ಕೊಡು ನಿನ್ನ ಧ್ಯಾನವ ಮನಶುಚಿ ಮಾಡಿ || ೨ ||
 |ದಾಸನ |

ಮೊರೆಹೊಕ್ಕವರ  ಕಾಯ್ವ  ಬಿರುದು
ಎನ್ನ ಮರೆಯದೆ ರಕ್ಷಣೆ ಮಾಡಯ್ಯ ಪೊರೆದು |
ದುರಿತಗಳೆಲ್ಲವ ತರಿದು
ಸಿರಿ ಪುರಂದರವಿಠ್ಠಲ ಎನ್ನನು ಪೊರೆದು || ೩ || |ದಾಸನ |

 ಗಾಯನ 
ಎಮ್ಮೆಸ್  ಸುಬ್ಬಲಕ್ಷ್ಮಿಯವರು  ಹಾಡಿದ  ಪದ, ಯೂಟ್ಯೂಬ್ ನಲ್ಲಿ
ವಿದ್ಯಾಭೂಷಣರು ಹಾಡಿದ  ಪದ, ಯೂಟ್ಯೂಬ್ ನಲ್ಲಿ

ವರ್ಗ: ಪುರಂದರದಾಸ ಸಾಹಿತ್ಯ